ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು! ನರೇಂದ್ರ ರೈ ದೇರ್ಲ
ಇಂದಿನ ಅಂಕಣ ಹೆದ್ದಾರಿಯ ವೇಗದಲ್ಲಿ ಮೌನವಾದ ಊರುಗಳು! ಒಂದು ಕೃಷಿ ಪ್ರಧಾನ ಹಳ್ಳಿಯನ್ನು ಸೀಳಿ ಸಾಗುವ ರಾಷ್ಟ್ರೀಯ ಹೆದ್ದಾರಿ ಆ ಕ್ಷಣದಿಂದಲೇ ಭೌಗೋಳಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಆ ಊರನ್ನು ಇಬ್ಬಾಗ ಮಾಡುತ್ತದೆ. ನಕ್ಷೆಯಲ್ಲಿ ಮಾತ್ರ ಅದು ಕಣ್ಣಿಗೆ ಕಾಣಿಸುವ ನೇರವಾದ ಸರಳ ಗೀರು. ಆದರೆ ಅಲ್ಲಿ ಬದುಕುವ ನೆಲದವರ ಬದುಕಿನಲ್ಲಿ ಅದು ತಿರುವು, ತಲ್ಲಣ, ತುಂಡಾಗುವ ನೆನಪು. ನಿನ್ನೆಯವರೆಗೆ ಮನೆಯ ಬಾಗಿಲಿನಿಂದ ನೇರವಾಗಿ ಕಾಲಿಟ್ಟರೆ ತಲುಪುತ್ತಿದ್ದ ಹೊಲ, ಪಂಚಾಯಿತಿ ಕಟ್ಟೆ, ಗೂಡಂಗಡಿ ಗಡಂಗು,ಮೀನಿನ ಅಂಗಡಿ, ಪ್ರೈಮರಿ ಶಾಲೆ ಎಲ್ಲವೂ ಇಂದು ಹೆದ್ದಾರಿಯ ಆ ಬದಿಯದು! ಬೆಳಗಿನ ಜಾವ ಹಸುವನ್ನು ಬಿಟ್ಟುಕೊಂಡು, ಬೀಜದ ಮೂಟೆ ಹೆಗಲಿಗೇರಿಸಿಕೊಂಡು ನಡೆದು ಹೋಗುತ್ತಿದ್ದ ದಾರಿ ಇದ್ದಕ್ಕಿದ್ದಂತೆ ಕತ್ತರಿಸಿಬಿಟ್ಟಿದೆ. ಅಂಡರ್‌ಪಾಸ್ ಇಲ್ಲ, ಸರ್ವಿಸ್‌ರೋಡ್ ಬಹುದೂರ. ಪರಿಣಾಮವಾಗಿ ರೈತನು ತನ್ನದೇ ಹೊಲಕ್ಕೆ ಹೋಗಲು ಮೈಲುಗಟ್ಟಲೆ ಸುತ್ತು ಹೊಡೆಯಬೇಕು. ಆ ಸುತ್ತು ಬರೀ ಕೇವಲ ದೈಹಿಕ ದೂರವಲ್ಲ; ಯಾರದೋ ಹಸು ಪೈರು ಮೇಯುತ್ತಿದ್ದರೂ ಅದನ್ನು ಓಡಿಸಲಾರದ ಸ್ಥಿತಿ. ಸಮಯದ ನಷ್ಟ, ಶ್ರಮದ ನಷ್ಟ, ಹಣದ ನಷ್ಟ. ಒಂದು ದಿನಕ್ಕೆ ಒಂದು ಗಂಟೆ ಹೆಚ್ಚಾಗಿ ನಡೆದು ಹೋಗುವುದು ಎಂದರೆ ಆ ಹೊಲಕ್ಕೆ ಕೊಡುವ ಗಮನ ಸಹಜವಾ...