ಖಾಲಿಯಾಗುತ್ತಿರುವ ಸಮಾಜ ನೀರಸ ಜೀವನ.. ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ

*ಖಾಲಿಯಾಗುತ್ತಿರುವ ಸಮಾಜ ನೀರಸ ಜೀವನ.. ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ:*

ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡು – ಹೆಣ್ಣು ಎಂಬಂತೆ 1-2 ಮಕ್ಕಳು. ಎಲ್ಲರಿಗೂ ಬೆಂಗಳೂರಿನಲ್ಲಿ ಕೆಲಸ. ಹೆಂಡತಿ ಮಕ್ಕಳೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ ವೃದ್ಧ ಅಪ್ಪ –ಅಮ್ಮಂದಿರು ಮಾತ್ರ ಹಳ್ಳಿಯಲ್ಲಿದ್ದಾರೆ. ಅವರಿಗೆ ಕೂಡುವುದಿಲ್ಲ. ಕೆಲಸ ಮಾಡಲು ಶಕ್ತಿಯಿಲ್ಲ. ಕೃಷಿ – ಬೇಸಾಯಕ್ಕೆ ಕೂಲಿ ಕೆಲಸಗಾರರು ಸಿಗುವುದಿಲ್ಲ. ತೋಟ, ಗದ್ದೆ ಎಲ್ಲಾ ಹಾಳು. ತರಕಾರಿಗಳು ಬೆಳೆಯುತ್ತಿಲ್ಲ. ಹಪ್ಪಳ-ಉಪ್ಪಿನಕಾಯಿ ಮಾಡುವವರಿಲ್ಲ. ಎಲ್ಲರೂ ಪೇಟೆಯಲ್ಲಿರುವ ಕಾರಣ ಹಳ್ಳಿಯ ಶಾಲೆಗಳಲ್ಲಿ ಮಕ್ಕಳಿಲ್ಲ. ಮದುವೆ- ಉಪನಯನಕ್ಕೆ ಪುರ್ರೆಂದು ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಹಾರಿ ಬರುತ್ತಾರೆ. ಊಟ ಮಾಡಿ ಕೈ ತೊಳೆದು ತಿರುಗಿ ನೋಡಿದಾಗ ಮತ್ತೆ ಬೆಂಗಳೂರಿಗೆ ಹೊರಡಲು ಕಾರು ಸ್ಟಾರ್ಟ್ ಆಗಿದೆ. ಸಂಬಂಧಗಳು ಕಳಚಿಕೊಳ್ಳುತ್ತಿವೆ. ಹೆತ್ತ ಕರುಳಿಗೆ ಮಕ್ಕಳನ್ನು, ಮೊಮ್ಮಕ್ಕಳನ್ನು ಮುದ್ದಿಸುವ, ಆಲಿಂಗಿಸುವ ಅವಕಾಶವಿಲ್ಲ, ಉದ್ಯೋಗದಲ್ಲಿರುವ ಮಕ್ಕಳಿಗೆ ಸ್ವಲ್ಪವೂ ಸಮಯವಿಲ್ಲ. ಹಳ್ಳಿಯ ಶಾಲೆಗಳಲ್ಲಿ ಸ್ಕೂಲ್ ಡೇ ಗೆ ಜನರಿಲ್ಲ. ರಾಮನವಮಿಯಾಗಲಿ, ಗಣೇಶೋತ್ಸವವಾಗಲಿ, ಸ್ವಾತಂತ್ರ್ಯ ದಿನಾಚರಣೆಯಾಗಲಿ, ಮೆರವಣಿಗೆ ಹೋಗಲು ಹಳ್ಳಿಗಳಲ್ಲಿ ಮಕ್ಕಳಿಲ್ಲ. ವೃದ್ಧ ಅಜ್ಜಂದಿರಿಗೆ ನಡೆಯಲು ಆಗುವುದಿಲ್ಲ. ಒಳ್ಳೆಯ ಡಾಕ್ಟರನ್ನು ನೋಡಿ, ಒಳ್ಳೆಯ ಚಿಕಿತ್ಸೆ ಪಡೆಯಿರಿ..ಎಂದು ಲಕ್ಷಗಟ್ಟಲೆ ಹಣ ಕಳಿಸಲು ತಯಾರಾಗಿದ್ದಾರೆ ಬೆಂಗಳೂರಿನಲ್ಲಿ ಸಂಸಾರ ಹೂಡಿರುವ ಮಕ್ಕಳು ಮೊಮ್ಮಕ್ಕಳು. ಪ್ರೀತಿ-ವಾತ್ಸಲ್ಯಗಳನ್ನು ಮೀರಿದ ಔಷಧಿಯಿಲ್ಲ ಎಂದು ಇವರಿಗೆ ತಿಳಿಸಿ ಹೇಳುವವರು ಯಾರು? ಇನ್ನೊಂದೆಡೆ ವಯಸ್ಸು ಮೀರಿ ಮುದುಕರಾಗುತ್ತಿದ್ದರೂ.. ಹುಡುಗಿ ಸಿಗದೆ ಬಾಕಿ ಉಳಿದಿರುವ ಅಣ್ಣ-ತಮ್ಮಂದಿರ ಮಾನಸಿಕ ವ್ಯಥೆ, ಅವರಿಗಾಗಿ ಕೊರಗುತ್ತಿರುವ ತಂದೆ ತಾಯಿಗಳು. ಹಳ್ಳಿಯ ಸಮುದಾಯ ಪೂರ್ತಿ ಕುಸಿದು ಹೋಗಿದೆ. ಸುಖ-ಸಂತೋಷಗಳು ಮಾಯವಾಗಿವೆ. ಹಣ ಗಳಿಸುವ ರೇಸ್ ನಲ್ಲಿ ಬೆಂಗಳೂರಿನಲ್ಲಿ ಹೆಣಗಾಡುತ್ತಿರುವ ಪೀಳಿಗೆಯವರೂ ಸುಖದಲ್ಲಿಲ್ಲ. ಅತ್ತ ಹಳ್ಳಿಗಳಲ್ಲಿ ಅವರ ತಂದೆ ತಾಯಿಗಳೂ ಸುಖದಲ್ಲಿಲ್ಲ. *ನಾವೇನು ಮಾಡುತ್ತಿದ್ದೇವೆ?* *ನಾವೆತ್ತ ಸಾಗುತ್ತಿದ್ದೇವೆ?*
(ವಾಟ್ಸಾಪ್ ನಿಂದ )

Comments

Popular posts from this blog

Father is Great

ಬಯಸದೇ ಬಂದ ಹರುಷದ ಭಾಗ್ಯ.....(ಮೂಲ ಲೇಖಕ:ಆನಂದ ಗೋಖಲೆ)

Human's Happiness