*ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?*
(ವಾಟ್ಸಾಪ್ ನಿಂದ ಸಂಗ್ರಹಿಸಿದ್ದು)
*ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?*ಸಾಮಾನ್ಯವಾಗಿ ಕೃಷಿಕನಿಗೆ ಬೆಳಗ್ಗಿನ ಹೊತ್ತು ತುರ್ತು ಕೆಲಸಗಳಿರುತ್ತವೆ. ಆ ಕಾರಣದಿಂದ ಪೇಟೆಯ ಕೆಲಸಕ್ಕಾಗಿ ಮನೆ ಬಿಡುವಾಗಲೇ ಗಂಟೆ 10 ಆಗುವುದು ಸಾಮಾನ್ಯ. ಹಾಗಾಗಿ ಪೇಟೆ ಜೀವನದ ಬೆಳಗ್ಗಿನ ಚಟುವಟಿಕೆಯ ಅರಿವು ಹೆಚ್ಚಿನ ಕೃಷಿಕರಿಗೆ ಇರುವುದಿಲ್ಲ.ಕೆಲವು ತಿಂಗಳ ಹಿಂದೆ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಅನಿವಾರ್ಯವಾಗಿ ಒಂದು ವಾರ ಕಾಲ ಪುತ್ತೂರು ಮೂಲಕ ಉಪ್ಪಿನಂಗಡಿಯವರೆಗೆ ಪ್ರಯಾಣಿಸಬೇಕಾಗಿತ್ತು. ದಾರಿ ಉದ್ದಕ್ಕೂ ಶಾಲಾ ಬಸ್ಸುಗಳ ಭರಾಟೆ ಕಂಡು ನನಗೆ ಆಶ್ಚರ್ಯ ಮತ್ತು ಕುತೂಹಲ ಎರಡೂ ಉಂಟಾಯಿತು. ಬಸ್ಸುಗಳ ಮೇಲೆ ಶಾಲೆಯ ಹೆಸರು ಮತ್ತು ಊರು ಇದ್ದ ಕಾರಣ ಯಾವೂರಿನ ಬಸ್ ಎಂದು ಸುಲಭದಲ್ಲಿ ಪತ್ತೆ ಹಚ್ಚುವಂತಾಯಿತು. ಸುಮಾರು 20 ಕಿಲೋ ಮೀಟರ್ ಆಸು ಪಾಸುಗಳಿಂದ ಪುತ್ತೂರು ಬಸ್ಸು ಆ ಊರಿಗೂ ಆ ಊರು ಬಸ್ಸು ಪುತ್ತೂರಿಗೂ ಬರುವುದನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೆ. ಎಲ್ಲಾ ಶಾಲೆಗಳಲ್ಲಿಯೂ ಒಂದೇ ತರದ ಸರಕಾರಿ ಶಿಕ್ಷಣ ಪದ್ಧತಿಯನ್ನು ಕಲಿಸುವಾಗ, ಅಷ್ಟಷ್ಟು ದೂರದ ಪ್ರಯಾಣವನ್ನು ಮಕ್ಕಳ ಮೇಲೆ ಹೇರುವುದು ಯಾಕಾಗಿ ಎಂದು ನನಗೆ ಈವರೆಗೂ ಗೊತ್ತಾಗಿಲ್ಲ.
ನಾನೆಲ್ಲಿಯೋ ಕೇಳಿದ ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಮಕ್ಕಳಿಗೆ ಪ್ರಾಪಂಚಿಕ ಅರಿವು ಬರುವುದು 12 ವರ್ಷದ ಪ್ರಾಯದವರೆಗಂತೆ. ಆ ಪ್ರಾಯದಲ್ಲಿ ನೋಡಿ,ಮಾಡಿ, ಕೇಳಿ ಕಲಿತ ವಿದ್ಯೆಗಳಿಗೆ ಪರಿಷ್ಕಾರರೂಪ ಕೊಡುವಂತದ್ದು 12 ವರ್ಷದ ನಂತರವಂತೆ. ಆಪ್ರಾಯದಲ್ಲಿ ನಾವು ಕೊಟ್ಟ ಸಂಸ್ಕಾರಗಳ ಪ್ರತಿರೂಪಗಳು ಭವಿಷ್ಯದ ಜನಾಂಗ. ಆ ಕಾರಣದಿಂದ ಬಸ್ಸುಗಳ ಭರಾಟೆಯನ್ನು ಕಂಡು ನಾನು ಆಶ್ಚರ್ಯ ಚಕಿತನಾಗಿದ್ದು. ಹೊರಪ್ರಪಂಚದಿಂದ ಕಲಿಯಬೇಕಾದ ಜ್ಞಾನ ಬಸ್ಸಿನ ಒಳಗೋ ಕೋಣೆಯೊಳಗೋ ಕುಳಿತರೆ ಅದೆಂತು ಬಂದೀತು
ನಾವೆಲ್ಲರೂ ಹೋಗುತ್ತಿದ್ದದ್ದು ಆರು ವರ್ಷಗಳ ನಂತರ ಪಕ್ಕದ ಸರಕಾರಿ ಶಾಲೆಗಳಿಗೆ. ಸುತ್ತಣ ಪ್ರಪಂಚವೇ ನಮಗೆ ಪಾಠಶಾಲೆ. ನಡಕೊಂಡೇ ಹೋಗುವ ಕಾರಣ ಸುತ್ತು ಮುತ್ತಿನ ಆಗುಹೋಗುಗಳೆಲ್ಲ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಕೂರುತಿತ್ತು. ಭತ್ತದ ಗದ್ದೆಗಳನ್ನು *ಹೋ* ಎಂಬ ರಾಗದೊಂದಿಗೆ ಉಳುವ ರೈತ, ನೇಗಿಲನ್ನು ಎಳೆಯುವ ಸುಂದರ ಎತ್ತುಗಳ ಮತ್ತು ಕೋಣಗಳ ಸಾಲುಗಳು, ಗೊಬ್ಬರ ಹರಡುವ ಹೆಣ್ಣಾಳುಗಳು, ನಡುಬಗ್ಗಿಸಿ ಕೆಲಸ ಮಾಡುವ ಶ್ರಮಜೀವಿಗಳು, ಮನೆಯ ತರಕಾರಿಗೋ ವೀಳ್ಯದೆಲೆಗೊ ಗೊಬ್ಬರಕ್ಕಾಗಿ ಗುಡ್ಡೆಯಲ್ಲಿ ಬಿದ್ದ ಬೆರಣಿ ಹೆಕ್ಕುವ ಮಂದಿ, ಶಾಲೆಗೆ ಹೋಗುವುದೆಂದು ಗೊತ್ತಿದ್ದರೂ ಶಾಲೆಗು ಪೋಪುನೇನಾ ಎಂದು ಪ್ರೀತಿಯಿಂದ ಮಾತನಾಡಿಸುವ ಕುಟುಂಬಗಳು, ಅದರೊಂದಿಗೆ ನಮ್ಮದೇ ಆದ ಆಟವಾಡುವುದು, ಹಣ್ಣು ಕೀಳುವುದು, ಮರ ಏರುವುದು ಇಂತಹ ನೂರಾರು ಪಾಠಗಳನ್ನು ನಿಸರ್ಗದಿಂದ ಕಲಿಯುತ್ತಿದ್ದೆವು. 10 ವರ್ಷಗಳ ನಂತರ ನಮ್ಮ ಪ್ರಾಯಕ್ಕೆ ಸಾಧ್ಯವಾಗುವ ಎಲ್ಲಾ ಕೆಲಸ ಕಾರ್ಯಗಳಿಗೂ ಮನೆಯವರು ಹಚ್ಚುತ್ತಿದ್ದರು. ಆ ಮೂಲಕ ಶಾಲೆಯಿಂದ ಅಕ್ಷರ ಜ್ಞಾನವನ್ನು ಕಲಿತರೂ, ಬದುಕಿನ ವಿದ್ಯೆಯನ್ನು ಪರಿಸರದ ಮತ್ತು ಶ್ರಮ ಜೀವನದ ಮೂಲಕ ಕಲಿಯುತ್ತಿದ್ದೆವು.
ಕೆಲವು ಹಳ್ಳಿಗಳಲ್ಲಿ ಶಾಲೆಗಳು ಇಲ್ಲದಿರುವುದರಿಂದ ದೂರ ದೂರಕ್ಕೆ ನಡಕೊಂಡು ಹೋಗಿ ಸಮಯ ಹಾಳಾಗಬಾರದು ಎಂಬ ದೃಷ್ಟಿಯಿಂದ ಊರ ಹಿರಿಯರು ಆಯಾಯ ಊರುಗಳಲ್ಲಿ ಪ್ರಾಥಮಿಕ ವಿದ್ಯಾ ಕೇಂದ್ರಗಳನ್ನು ತಮ್ಮ ತಮ್ಮ ಕೊಡುಗೆಗಳನ್ನು ಕೊಟ್ಟು ಸರಕಾರದ ಮೂಲಕ ತೆರೆಸಿದ್ದರು.ಇಂದು ಆಧುನಿಕ ವಿದ್ಯಾಭ್ಯಾಸದ ಹೆಸರಿನಲ್ಲಿ ಆ ಶಾಲೆಗಳೆಲ್ಲ ಮುಚ್ಚಿವೆ ಅಥವಾ ಮುಚ್ಚುವ ಹಂತದಲ್ಲಿವೆ. ಈ ಮೂಲಕ ಹಿರಿಯರ ಆಶಯಗಳನ್ನು ಮಣ್ಣು ಪಾಲು ಮಾಡಿವೆ. ಸರಕಾರಿ ಶಾಲೆಗಳ ವ್ಯವಸ್ಥಿತ ಕೊಲೆಯನ್ನು ಸರಕಾರಗಳೇ ಮಾಡಿವೆ.
ಇಂದು ಮನೆ ಬಾಗಿಲಿಗೆ ಬಸ್ಸುಗಳು ಬರುತ್ತಿವೆ. ಹತ್ತಿರದಲ್ಲೇ ಶಾಲೆಗಳಿದ್ದರೂ ದೂರಕ್ಕೆ ಹೋಗುವುದು ಪ್ರಗತಿಯ ಮತ್ತು ಶ್ರೇಷ್ಠತೆಯ ಸಂಕೇತ ಎಂಬ ಮನೋಭಾವ ಹೆಚ್ಚುತ್ತಿವೆ. ಬೆಳಗ್ಗೆ ಏಳುವರೆ ಎಂಟು ಗಂಟೆಗೆ ಹೊತ್ತಿಗೆ ನಾಲ್ಕು ಗೋಡೆಗಳಂತಿರುವ ಬಸ್ಸಿನೊಳಗೆ ತುಂಬಿ ಬಿಟ್ಟರೆ ಮತ್ತೆ ಶಾಲಾಂಗಣವನ್ನು ಪ್ರವೇಶಿಸಿ ಪುನಃ ನಾಲ್ಕು ಗೋಡೆ ಒಳಗೆ ತುಂಬುವುದರಲ್ಲಿ ಪ್ರಾಪಂಚಿಕ ಜ್ಞಾನವನ್ನು ಕಾಣುತ್ತೇವೆ. ಮನೆ ಮುಟ್ಟುವಾಗ ಸೂರ್ಯ ಪಶ್ಚಿಮಾಭಿಮುಖವಾಗಿರುತ್ತಾನೆ. ಮನೆ ಕೆಲಸದ ಒತ್ತಡದಿಂದಾಗಿ ಮತ್ತೆ ಮನೆಯೊಳಗೆ ಬಂದಿಯಾಗಲು ತಯಾರಾಗುವುದರಿಂದ, ಮನೆಯಲ್ಲಿ ಏನೇನು ಕೆಲಸ ಕಾರ್ಯಗಳು ನಡೆಯುತ್ತದೆ ಎಂಬ ಅರಿವೇ ಮಕ್ಕಳಿಗೆ ಇರುವುದಿಲ್ಲ. ಮಹಾನಗರಗಳ ಕೆಲವು ಶಾಲೆಗಳ ಜಾಹೀರಾತುಗಳನ್ನು ಗಮನಿಸಿದರಂತೂ, ಐಷಾರಾಮಿ ಕಾರುಗಳ ಜಾಹೀರಾತಿಗೆ ಏನೂ ಕಡಿಮೆ ಇರುವುದಿಲ್ಲ. ಐಷಾರಾಮಿ ಜೀವನಕ್ಕೆ ರತ್ನಗಂಬಳಿ ಹಾಸಿ ಕರೆದಂತೆ ಇರುತ್ತದೆ.
*ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ* ಎಂಬ ಗಾದೆ ಮಾತಿನಂತೆ ದುಡಿಮೆ ಸಂಸ್ಕೃತಿಯ ಜ್ಞಾನ, ಮಾಡುವುದು ಬಿಡಿ, ನೋಡಲೂ ಸಿಗದಿದ್ದರೆ ಆ ಸಂಸ್ಕೃತಿಯಿಂದ ಮಕ್ಕಳು ದೂರವಾಗದೆ ಇದ್ದಾರೆಯೇ? ಅದರೊಂದಿಗೆ ಕೆಲಸ ಮಾಡಿಸುವುದೆಂದರೆ, ಮಕ್ಕಳ ಮಕ್ಕಳಾಟವನ್ನು, ಜ್ಞಾನಾರ್ಜನೆಯನ್ನು ಕಸಿದುಕೊಂಡಂತೆ ಮತ್ತು ಶಿಕ್ಷಾರ್ಹ ಅಪರಾಧ ಎಂಬ ಅವಿವೇಕದ ಕಾನೂನು ಮತ್ತಷ್ಟು ದುಡಿಮೆಯ ಸಂಕೃತಿಯಿಂದ ವಿಮುಖರಾಗಲು ಕಾರಣವಾಯಿತು.
ಎಳವೆಯಿಂದಲೇ ಸಂಗೀತ ಕಲಿತರೆ ಮಾತ್ರ ಆತ ಉತ್ತಮ ಸಂಗೀತಗಾರನಾಗಬಲ್ಲ, ನಿರಂತರ ಅಭ್ಯಾಸದ ಮೂಲಕ ಉತ್ತಮ ಓಟಗಾರ ಮತ್ತು ಆಟಗಾರನಾಗಬಲ್ಲ, ನೃತ್ಯಕಾರನಾಗಬಲ್ಲ, ಕಲಾಗಾರನಾಗಬಲ್ಲ ಹಾಗಿರುವಾಗ ಚಿಕ್ಕಪ್ರಾಯದಲ್ಲೇ ಅಲ್ಲೆಲ್ಲವೂ ಒತ್ತಡವನ್ನು ಹೇರಿದರೆ ಅದು ಶೋಷಣೆ ಎನಿಸುವುದಿಲ್ಲವೆಂದಾದರೆ, ಕೆಲಸ ಮಾಡಿಸುವುದು ಶೋಷಣೆ ಎಂದಾಗಲು ಹೇಗೆ ಸಾಧ್ಯ ಎಂಬುದು ನನಗೆ ಇಂದಿನವರೆಗೂ ಅರ್ಥವಾಗದ ಸಂಗತಿ. ಅಲ್ಲೆಲ್ಲ ಪ್ರತಿಭಾ ಪುರಸ್ಕಾರವೆಂದು ಶಾಲೆಗಳಲ್ಲಿ ಮಕ್ಕಳನ್ನು ಪುರಸ್ಕರಿಸುವಾಗ, ಶಾರೀರಿಕ ಶ್ರಮದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸದೇ ಇರುವುದು ಮಕ್ಕಳ ಮನಸ್ಸಿನಲ್ಲಿ ಕೆಲಸ ಮಾಡುವುದೆಂದರೆ ಅವಮಾನ ಮತ್ತು ಹೀನ ಕೆಲಸ ಎಂಬ ಮನೋಭಾವದತ್ತ ಕೊಂಡೊಯುತ್ತದೆ. ಎಳವೆಯಿಂದಲೇ ನಡೆಯುವ ನಿರಂತರ ಅಭ್ಯಾಸವೇ ಕೆಲಸದ ಮೇಲೆ ಪ್ರೀತಿ ಮತ್ತು ಪರಿಪೂರ್ಣತೆ ಹುಟ್ಟಲಿರುವ ಏಕೈಕ ಮಾರ್ಗ.
ಕಲೆಗಳಲಿ ಪರಮಕಲೆ ಜೀವನದ ಲಲಿತ ಕಲೆ,
ಕಲಿಸಲದನಳವಲ್ಲ ಬಾಹ್ಯ ಬೋಧನೆಯಿಂ,
ಒಲಿದೊಲಿಸಿಕೊಳುವ ಲೌಕಿಕ ನಯದ ಸೊಗಸ ನೀಂ,
ತಿಳಿವುದೊಳಹದದಿಂದ ಮಂಕುತಿಮ್ಮ.
ಪರಮ ಕಲೆಯಾದ ಜೀವನದ ಕಲೆಯನ್ನು ಒಲಿಸಿಕೊಳ್ಳುವ ಒಳಗಣ್ಣನ್ನು ತೆರೆಸುವ ವಿದ್ಯೆಯು ಮಕ್ಕಳಿಗೆ ದೊರೆಯುವಂತಾಗಲಿ ಎಂಬ ಮಂಕುತಿಮ್ಮನ ಮಾತಿಗೆ ಶರಣು ಶರಣು ಶರಣು .
ಎ..ಪಿ.ಸದಾಶಿವ ಮರಿಕೆ.
Comments
Post a Comment