ವಿಧಿ ಲಿಖಿತ
ಕಥೆ ಓದಿ.....
ಒಂದೂರಿನಲ್ಲಿ ದೈವತ್ವವನ್ನು ಧಿಕ್ಕರಿಸುತ್ತ, ಕಾರ್ಯ ಯಶಸ್ವಿಗೆ ಪ್ರಯತ್ನವೇ ಪ್ರಾಮುಖ್ಯ, ದೈವಿ ಸಹಾಯ ಅನಗತ್ಯ ಎಂದು ವಾದಿಸುವ ಒಬ್ಬ ನಾಸ್ತಿಕನಿದ್ದನು. ದೈವತ್ವವನ್ನು ನಿಂದಿಸುತ್ತ ಪಾಮರರನ್ನು ಕೆಣಕುವದೇ ಅವನ ಕೆಲಸವಾಗಿತ್ತು.
ಒಂದುದಿನ ಅವನು ರಸ್ತೆಯಲ್ಲಿ ನಡೆದು ಹೋಗುತ್ತಿರಲು ಎದುರಿನಲ್ಲಿ ಅವನದೇ ಸಹಪಾಠಿ, ಪ್ರಸಿದ್ಧ ಜ್ಯೋತಿಷಿಯೊಬ್ಬರು ಸಿಕ್ಕರು. ಅವರನ್ನು ನೋಡಿದ ಈತ ಬೇಕೆಂತಲೇ ಅವರನ್ನು ಕೆಣಕಲು, 'ಏನು ಶಾಸ್ತ್ರಿಗಳೇ ಯಾವಕಡೆ ಬುರುಡೆ ಶಾಸ್ತ್ರ ಬಿಡಲು ಹೊರಟಿರುವಿರಿ ? ನಾನೂ ನಿಮ್ಮ ಹತ್ತಿರ ನನ್ನ ಇಂದಿನ ಭವಿಷ್ಯ ತಿಳಿಯಬೇಕೆಂದು ನಿಮ್ಮನ್ನೇ ಹುಡುಕುತ್ತ ಬಂದಿದ್ದೇನೆ. ಇಂದಿನ ನನ್ನ ಭವಿಷ್ಯ ಹೇಳುವಿರಾ ? ಎಂದು ಕೇಳಲು, ಕಾರ್ಯ ನಿಮಿತ್ತ ಆತುರದಲ್ಲಿದ್ದ ಶಾಸ್ತ್ರಿಗಳು ಹೇಗಾದರೂ ಈ ಅಸಂಗತವಾದಿಯಿಂದ ಬಿಡುಗಡೆ ಪಡೆಯಲು, ಸಂಖ್ಯಾಧಾರದ ಮೇಲೆ ದಿನ ಭವಿಷ್ಯವನ್ನು ಹೇಳಲು ಸಿದ್ಧಹಸ್ತರಾಗಿದ್ದ ಶಾಸ್ತ್ರಿಗಳು, 'ಆಯಿತಪ್ಪ ೧೦ರ ಒಳಗಿನ ಒಂದು ಸಂಖ್ಯೆಯನ್ನು ಹೇಳು' ಎಂದರು.
ಬುರುಡೆ ನಾಸ್ತಿಕನು ಯಾವುದೋ ಒಂದು ಸಂಖ್ಯೆ ಹೇಳಲು ಶಾಸ್ತ್ರಿಗಳು ಆ ಸಂಖ್ಯೆಯ ಆಧಾರದ ಮೇಲೆ ಗ್ರಹಗತಿಗಳ ಲೆಕ್ಖಾಚಾರ ಮಾಡಿ 'ಅಯ್ಯಾ ಇಂದು ನಿನಗೆ ಸುದಿನ, ನಿನ್ನ ಯೋಗದಲ್ಲಿ ಪರಮಾನ್ನ ಸವಿಯುವ ಯೋಗವಿದೆ ' ಎಂದರು. ಆ ನಾಸ್ತಿಕ ಶಾಸ್ತ್ರಿಗಳ ಹತ್ತಿರ 'ನಾನು ಮನಸ್ಸು ಮಾಡದೇ ಪರಮಾನ್ನ ತಿನ್ನಲು ಹೇಗೆ ಸಾಧ್ಯ ? ಯೇನೇ ಆದರೂ ನಾನು ಈವತ್ತು ಪರಮಾನ ತಿನ್ನುವದಿಲ್ಲ. ನಿಮ್ಮ ಮಾತನ್ನು ಸುಳ್ಳು ಮಾಡುತ್ತೇನೆ ' ಎಂದು ಶಾಸ್ತ್ರಿಗಳಲ್ಲಿ ಶಪಥ ಮಾಡಿ ಮುಂದೆ ಹೋದನು.
ಹಾಗೆ ಹೋಗುತ್ತಿರಲು ಅವನ ಮನಸ್ಸಿನಲ್ಲಿ ಒಂದು ಅನುಮಾನ ಕಾಡಿತು. ಊರಿನಲ್ಲಿದ್ದರೆ ಯಾರಾದರೂ ಒತ್ತಾಯ ಮಾಡಿ ಪಾಯಸ ತಿನ್ನಬೇಕೆಂದು ಗಂಟುಬಿದ್ದರೆ ಪಾಯಸ ಕುಡಿಯಬೇಕಾದಂತಹ ಪರಿಸ್ಥಿತಿ ಬರಬಹುದು. ಕಾಡಿಗೆ ಹೋದರೆ ಯಾರೂ ಒತ್ತಾಯ ಮಾಡುವಹಾಗಿಲ್ಲ,ಎಂದು ತಿಳಿದು ಕಾಡಿಗೆ ಹೋದನು. ಕಾಡಿನಲ್ಲಿಯೂ ಯಾರಾದರೂ ಪರಿಚಯದವರು ಸಿಕ್ಕರೆ ತೊಂದರೆಯಾಗಬಹುದೆಂದು ಒಂದು ಎತ್ತರದ ಮರವನ್ನೇರಿ ಮರದ ತುತ್ತ ತುದಿಯಲ್ಲಿ ಎಲೆಯ ಮರೆಯಲ್ಲಿ ಅಡಗಿಕುಳಿತನು. ಇಡೀ ದಿನ ಇದೇ ಮರದಲ್ಲಿದ್ದು ಬೆಳಿಗ್ಗೆ ತಿರುಗಿ ಮನೆಗೆ ಹೋಗುವದೆಂದು ಸಂಕಲ್ಪಿಸಿದನು.
ಇಂತಿರಲು ಆ ಅರಣ್ಯದ ಮಾರ್ಗವಾಗಿ ಒಂದು ಮದುವೆ ದಿಬ್ಬಣದವರು ಪರ ಊರಲ್ಲಿ ಮದುವೆಕಾರ್ಯ ಮುಗಿಸಿ ವಾಪಸ್ ಮನೆಗೆ ಹೊರಟಿದ್ದರು. ಊರು ತುಂಬಾ ದೂರವಿರುವದರಿಂದಲೂ, ಮಧ್ಯಾಹ್ನದ ಸಮಯ ಸಮೀಪಿಸುತ್ತಿರುವದರಿಂದಲೂ ಹಸಿವು ನಿವಾರಣೆಗೆ ಮರದ ಅಡಿಯಲ್ಲಿ ಒಲೆಯನ್ನು ಹಾಕಿ, ತಾವು ತಂದ ದವಸದಿಂದ ಪಾಯಸದ ತಯಾರಿಯಲ್ಲಿ ತೊಡಗಿ, ಇನ್ನೇನು ಪಾಯಸ ತಯಾರಿಯಾಯಿತು ಎನ್ನುವಾಗ ದೂರದಿಂದ ಕುದುರೆಗಳ ಓಟದ ಶಬ್ಧ ಕೇಳಿ ಢಕಾಯಿತರು ಬರುತ್ತಿರುವರೆಂದು ಖಚಿತಪಡಿಸಿಕೊಂಡು ಇದ್ದ,ಬಿದ್ದ ಸಮಾನುಗಳನ್ನೆಲ್ಲ ಎತ್ತಿಕೊಂಡು ಅಲ್ಲಿಂದ ಎಲ್ಲರೂ ಓಟ ಕಿತ್ತರು. ಪಾಯಸದ ತಪ್ಪಲೆ ಬಿಸಿ ಇರುವದರಿಂದ ಉಪಪಾಯವಿಲ್ಲದೇ ಅದನ್ನು ಅಲ್ಲಿಯೇ ಬಿಟ್ಟು ಓಡಿಹೋದರು.
ಕುದುರೆಯೇರಿ ಬಂದ ಡಕಾಯಿತರ ಗುಂಪು ದಣಿವಾರಿಸಿಕೊಳ್ಳಲು ಅದೇ ಮರದಡಿಯಲ್ಲಿ ಬೀಡು ಬಿಟ್ಟು ಒಲೆಯ ಮೇಲೆ ಪಾಯಸ ಸಿದ್ಧವಾಗಿರುವದನ್ನು ನೋಡಿ ಖುಶಿಯಿಂದ ಪಾಯಸ ಸವಿದು ತಮ್ಮ ಹಸಿವನ್ನು ಹಿಂಗಿಸಿಕೊಳ್ಳಲು ಮುಂದಾದರು. ಆಗ ಅವರಲ್ಲಿಯ ಮುಖಂಡನಿಗೆ ಏನೋ ಅನುಮಾನ ಬಂದು, ' ಯಾರೂ ಪಾಯಸ ಕುಡಿಯಬೇಡಿ. ಪಾಯಸ ಸಿದ್ಧಪಡಿಸಿ ಕುಡಿಯದೇ ಹಾಗೇ ಹೋಗಿದ್ದಾನೆಂದರೆ ಪಾಯಸಕ್ಕೆ ವಿಷ ಬೆರೆಸಿ ನಮ್ಮನ್ನು ಕೊಲ್ಲಲು ಯಾರೋ ಈ ಉಪಾಯ ಮಾಡಿದ್ದಾನೆ. ಒಂದು ವೇಳೆ ನನ್ನ ಅನುಮಾನ ನಿಜವಾದರೆ ಅವನು ಇಲ್ಲೇ ಎಲ್ಲಿಯೋ ಅಡಗಿ ಕುಳಿತು ನಮ್ಮ ಸಾವನ್ನು ಎದುರು ನೋಡುತ್ತಿರುತ್ತಾನೆ. ಎಲ್ಲರೂ ಸೇರಿ ಸುತ್ತಲೂ ಸೂಕ್ಷ್ಮವಾಗಿ ಹುಡುಕಿ. ಯಾರಿದ್ದರೂ ನನ್ನೆದುರು ಎಳೆದು ತನ್ನಿ ' ಎಂದು ಆಜ್ಞಾಪಿಸಿದನು.
ಹಾಗೇ ಅವನ ಅನುಚರರು ಎಲ್ಲಕಡೆ ಹುಡುಕಲು ಮರದ ಮೇಲೆ ಅಡಗಿ ಕುಳಿತಿದ್ದ ಆಸಾಮಿ ಅವರ ಕಣ್ಣಿಗೆ ಬಿದ್ದನು. ಮರದಿಂದ ಅವನನ್ನು ಇಳಿಸಿ ಮುಖಂಡನ ಎದುರು ಎಳೆದುತಂದು ನಿಲ್ಲಿಸಿದರು. ಚೋರಾಗ್ರೇಸರನು ಅವನನ್ನು ದುರುಗುಟ್ಟಿ ನೋಡುತ್ತ, ಪಾಯಸ ಮಾಡಿಟ್ಟು ಮರವನ್ನೇರಿ ಅಡಗಿ ಕುಳಿತಿರುವದೇಕೆ ? ಏನು ನಿನ್ನ ಉದ್ದೇಶ. ಪಾಯಸಕ್ಕೆ ವಿಶ ಬೆರೆಸಿ ನಮ್ಮ ಕೊಂದು ಸಾವನ್ನು ಸಂಭ್ರಮಿಸಲು ಕಾಯುತ್ತ ಅಡಗಿ ಕುಳಿತಿರುವೆಯಾ ? ಎಂದು ಕೇಳಿದನು.
ಇಲ್ಲ, ಇಲ್ಲ ನಾನು ಪಾಯಸ ಮಾಡಿದ್ದಲ್ಲ. ಇದನ್ನು ಮಾಡಿದವರು ನಿಮ್ಮ ಆಗಮನದ ಜಾಡು ತಿಳಿದು ಪಾಯಸವನ್ನು ಹಾಗೇ ಬಿಟ್ಟು ಓಡಿ ಹೋದರು. ಇದರಲ್ಲಿ ವಿಷವನ್ನು ಬೆರೆಸಿಲ್ಲ. ನಾನು ನಿರಪರಾಧಿ. ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿದನು.
'ನೀನು ಪಾಯಸವನ್ನು ಮಾಡಿಲ್ಲ ಎಂದಾದರೆ, ಮೊದಲು ಪಾಯಸವನ್ನು ನೀನು ಕುಡಿದು ತೋರಿಸು. ನಿನಗೇನೂ ಆಗಿಲ್ಲ ಎಂದಾದರೆ ನಾವು ಕುಡಿಯುತ್ತೇವೆ, ಮತ್ತೂ ನಿನ್ನನ್ನು ಕ್ಷೇಮವಾಗಿ ಹೋಗಲು ಬಿಡುತ್ತೇವೆ'. ಎಂದನು.
ಇಲ್ಲ, ಇಲ್ಲ ನಾನು ಇಂದು ಪಾಯಸವನ್ನು ಕುಡಿಯುವದಿಲ್ಲವೆಂದು ತೀರ್ಮಾನಿಸಿದ್ದೇನೆ ನನಗೆ ಒತ್ತಾಯ ಮಾಡಬೇಡಿ. ನಿವೆಲ್ಲ ಪಾಯಸ ಕುಡಿಯಿರಿ. ಎಂದನು.
ಕಳ್ಳರಗೆ ಅವನ ಮಾತಿನಿಂದ ಅನುಮಾನ ಇನ್ನೂ ಜಾಸ್ತಿಯಾಗಿ, ಎರಡು ಜನ ಆತನ ಕೈ ಹಿಡಿದು, ಆತ ಎಷ್ಟೇ ಬೇಡವೆಂದು ಗೋಗರೆದರೂ ಬಲಾತ್ಕಾರದಿಂದ ಆತನಿಗೆ ಪಾಯಸ ಕುಡಿಸಿದರು. ಕುಡಿದ ಎಷ್ಟೋ ಸಮಯದತನಕ ಆತನಿಗೆ ಏನೂ ಆಗದಿರುವದನ್ನು ಕಂಡು ಪಾಯಸದಲ್ಲಿ ವಿಷ ಮಿಶ್ರಣವಾಗಿಲ್ಲದಿರುವದನ್ನು ಖಚಿತ ಪಡಿಸಿಕೊಂಡು ಪಾಯಸವನ್ನು ಹಸಿವು ನೀಗುವತನಕ ಕುಡಿದು ಅಲ್ಲಿಂದ ಜಾಗ ಖಾಲಿ ಮಾಡಿದರು.
ಪರಮಾನ್ನ ಸವಿಯುವ ಭಾಗ್ಯ ಆ ಮಂದಮತಿಯ ಹಣೆಯಮೇಲೆ ವಿಧಿ ಬರೆದಿರುವಾಗ ಆತನಿಂದ ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವೇ !
" ಸರ್ವಂ ನಿಷ್ಫಲಿತಂ ತದೈವ ವಿಧಿನಾ ದೈವೀ ಬಲಂ ದುರ್ಬಲಂ "
ದೈವಬಲವಿಲ್ಲವೆಂದಾದರೆ ಮಾಡಿದ ಎಲ್ಲಾ ಕೆಲಸಗಳೂ ನಿಷ್ಪ್ರಯೋಜನವಾಗುವದು.
#ಆದ್ದರಿಂದ,
"ಅಧಿಷ್ಟಾನಂ ತಥಾ ಕರ್ತಾ ಕರಣಂ ಚ ಪೃಥಗ್ನಿಧಮ್ |
ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂಚೈವಾತ್ರ ಪಂಚಮಮ್ ||
"ಕಾರ್ಯ ಸಿದ್ದಿಗಾಗಿ ಕೆಲಸ ಮಾಡುವ ಸ್ಥಳ, ಮಾಡುವ ಕರ್ತೃು, ಅಗತ್ಯವುಳ್ಳ ಸಾಮಗ್ರಿಗಳು, ನಾನಾರೂಪವಾದ ಕೃತಿಗಳು, ಇವುಗಳ ಜತೆಗೆ ಐದನೇಯದಾದ ದೈವೀ ಸಹಾಯವೂ ಕಾರಣವಾಗಿರುತ್ತದೆ"
"ಯಥಾ ಕಂದುಕಪಾತೇನೋತ್ಪತತ್ಯಾರ್ಯಃ ಪತನ್ನಪಿ |
ತಥಾ ತ್ವನಾರ್ಯಃ ಪತತಿ ಮೃತ್ಪಿಂಡಪತನಂ ತಥಾ || "
ದೈವೀ ಬಲ ಸಂಪನ್ನನು ಕೆಳಗೆ ಬಿದ್ದರೂ ಚಂಡಿನೋಪಾದಿಯಲ್ಲಿ ಪುಟಿದು ಮೇಲೇಳುವನು. ದೈವಿಬಲ ವಿಹೀನನು ಮಣ್ಣಿನ ಮುದ್ದೆಯಂತೆ ಬಿದ್ವನು ಮತ್ತೆ ಮೇಲೆ ಏಳುವದಿಲ್ಲ.
ನಾವು ಎಷ್ಟೇ "ನಾನು ಮಾಡಿದ್ದೇನೆ," ಎಂದರೂ ಅದರ ಯಶಸ್ಸಿನ ಹಿಂದೆ ದೈವೀ ಕೃಪೆ ಇದೆ ಎಂತಲೇ ಅರ್ಥ.
"ಯಸ್ಮೈ ದೇವಾಃ ಪ್ರಯಚ್ಛಂತಿ ಪುರುಷಾಯ ಪರಾಭವಂ |
ಬುದ್ಧಿಂ ತಸ್ಯಾಪಕರ್ಷಂತಿ ಸೋSವಾಚೀನಾನಿ ಪಶ್ಯತಿ ||
ದೇವತೆಗಳು ಯಾವ ಪುರುಷನ ಸೋಲನ್ನು ಬಯಸುತ್ತಾರೋ, ಅವನ ಬುದ್ದಿಯನ್ನು ಹಿ0ದಕ್ಕೆ ಎಳೆದುಕೊಂಡುಬಿಡುತ್ತಾರೆ. ಆಗ ಅವನು ಎಲ್ಲವನ್ನೂ ತಲೆಕೆಳಗಾಗಿ ನೋಡುತ್ತಾನೆ."
ಹಾಗೆಂದು ಪುರುಷ ಪ್ರಯತ್ನವಿಲ್ಲದೇ ದೈವೀ ಸಹಾಯ ಸಿಗಲಾರದು.
"ಷಡಭಿರ್ಮನುಷ್ಯ ಚಿಂತಾನಾಂ ಸಪ್ತಮಂ ದೈವ ಚಿಂತನಂ"
"ಯಥಾ ಬೀಜಂ ವಿನಾ ಕ್ಷೇತ್ರಮುಪ್ತಂ ಭವತಿ ನಿಷ್ಫಲಂ |
ತಥಾ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ ||"
ಬೀಜವಿಲ್ಲದೇ ಹೊಲವನ್ನು ಉತ್ತರೆ ಅದು ನಿಷ್ಫಲವಾಗುವದೋ, ಹಾಗೆ ಪುರುಷ ಪ್ರಯತ್ನವಿನಃ ದೈವೀ ಫಲ ಸಿದ್ದಿಸುವದಿಲ್ಲ.
#ಹರಿಃ_ಓಮ್.
(ಕೃಪೆ: ವಾಟ್ಸಾಪ್)
Comments
Post a Comment