ತೃಪ್ತಿ ಎಂಬುದೊಂದಿರಬೇಕು...
ಕಥೆ
============================
ಅದೊಂದು ನದೀ ಪಾತ್ರ. ಆ ನದಿಯಲ್ಲಿ ಮೀನೊಂದು🐋 ವಾಸಿಸುತ್ತಿತ್ತು. ನದಿಯ ಪಕ್ಕದಲ್ಲಿದ್ದ ಮರದಲ್ಲಿ, ನವಿಲೊಂದು🦚 ಮನೆ ಮಾಡಿತ್ತು. ಅವೆರಡರ ಮಧ್ಯೆ ಹೇಗೋ ಎಂತೋ , ಬಹಳ ಗೆಳೆತನವಾಯಿತು. ಗೆಳೆತನ ಬೆಳೆಯುತ್ತ ಹೋದಂತೆ , ಒಬ್ಬರಿಗೊಬ್ಬರು ಜೀವ ಬಿಡಲೂ ಸಿದ್ಧ ಎಂಬಷ್ಟು ಆತ್ಮೀಯವಾದವು. ಹೀಗಿರುವಾಗ, ಒಮ್ಮೆ ಬೇಟೆಗಾರರ ತಂಡವೊಂದು ಅಲ್ಲಿಗೆ ಬಂದಿತು. ಮರದ ಮೇಲೆ ಕುಳಿತು, ನೀರಿನಲ್ಲಿದ್ದ ಮೀನಿನೊಂದಿಗೆ ಹರಟುತ್ತಿದ್ದ ನವಿಲನ್ನು , ಆ ತಂಡದ ಒಬ್ಬ ಆಸಾಮಿ ನೋಡಿಬಿಟ್ಟ . ಅದನ್ನು ಹಿಡಿದು ಕೈಕಾಲು ಕಟ್ಟಿ , ಒಯ್ಯಲು ಅನುವಾದ.
ನೀರಿನಡಿಯಿಂದ ಮೀನು ಇದನ್ನೆಲ್ಲ ನೋಡಿತು. ಮೆಲ್ಲಗೆ , ತಲೆ ಹೊರಗೆ ಹಾಕಿ , ಅಣ್ಣಾ ಬೇಟೆಗಾರನೇ, ಇದುವರೆಗೂ ಯಾರೂ ಕಂಡಿರದ ಅಮೂಲ್ಯವಾದ ಮುತ್ತನ್ನು , ನಾನು ತಂದು ಕೊಡುತ್ತೇನೆ . ನನ್ನ ಗೆಳೆಯನನ್ನು ಬಿಟ್ಟು ಬಿಡು ಎಂದಿತು. ಬೇಟೆಗಾರ ಒಪ್ಪಿದ. ಮೀನು ನೀರಿನಾಳಕ್ಕೆ ಹೋಗಿ ಒಂದು ಮುತ್ತನ್ನು ಕಚ್ಚಿ ತಂದು ಅವನ ಕೈಯ್ಯಲ್ಲಿಟ್ಟಿತು. ಬೇಟೆಗಾರ ನೋಡಿದವನೇ ಕಣ್ಣರಳಿಸಿದ. ಇಂಥ ಸುಂದರ ಮುತ್ತನ್ನು , ಅವನೆಂದೂ ಕಂಡಿರಲಿಲ್ಲ. ಅದರ ಬೆಲೆ ಅಂದಾಜಿಸಿದ. ಅದೇ ಗುಂಗಿನಲ್ಲಿ , ನವಿಲನ್ನು ಬಿಡುಗಡೆಗೊಳಿಸಿದ. ನವಿಲು ಮತ್ತೆ ಮರದ ಮೇಲಕ್ಕೆ ಹಾರಿತು.
ಮರುದಿನ ಬೇಟೆಗಾರ ಪುನಃ ಬಂದ. ಅವನ ಕಣ್ಣುಗಳಲ್ಲಿ ದುರಾಸೆ ಕುಣಿಯುತ್ತಿತ್ತು. ಮೀನಿಗೆ ಕೂಡಲೇ ಗೊತ್ತಾಯಿತು. ಮೀನನ್ನು ನೋಡಿದವನೇ , “ಒಂಟಿ ಮುತ್ತಿಗೆ ಅಷ್ಟೇನೂ ಬೆಲೆ ಇಲ್ಲವಂತೆ, ಜೋಡಿಗೆ ಬೆಲೆ ಎಂದು ಅಕ್ಕಸಾಲಿಗ ಹೇಳಿದ . ಹಾಗಾಗಿ ನೀನು ಇಂಥದೇ ಇನ್ನೊಂದು ಮುತ್ತು ತಂದು ಕೊಟ್ಟರೆ ನಿನ್ನ ಗೆಳೆಯನ ತಂಟೆಗೆ, ನಾನು ಇನ್ನೆಂದೂ ಬರುವುದಿಲ್ಲ , ಮಾತು ಕೊಡುತ್ತೇನೆ” ಎಂದ.
ಜಾಣ ಮೀನು, ತಕ್ಷಣವೇ ,ಅಂಥದ್ದೇ ಇನ್ನೊಂದು ಮುತ್ತು ಹುಡುಕಬೇಕಾದರೆ, ನಿನ್ನ ಕೈಲಿರುವುದನ್ನು ನನಗೆ ಕೊಡಬೇಕು . ನಾನು ಅಂಥದ್ದೇ ಹುಡುಕಿ ತರುತ್ತೇನೆ ಎಂದು ಹೇಳಿ, ಬಂಡೆಯ ಮೇಲೆ ಮುತ್ತನ್ನಿಡಲು ಹೇಳಿತು. ಬೇಟೆಗಾರ ಹಾಗೆಯೇ ಮಾಡಿದ. ಮೀನು ಹಾರಿ ಮುತ್ತನ್ನು ಕಚ್ಚಿಕೊಂಡು ನೀರಿನೊಳಗಿಳಿಯಿತು.ಅಲ್ಲಿಂದಲೇ ತಲೆ ಎತ್ತಿ, ಬೇಟೆಗಾರನೇ, ನನ್ನ ಗೆಳೆಯ, ನಿನ್ನ ಕೈಗೆಟುಕದಷ್ಟು ದೂರ ನಿನ್ನೆಯೇ ಹೊರಟು ಹೋಗಿದ್ದಾನೆ. ನೀನು ಮರಳಿ ಬಂದೇ ಬರುತ್ತೀಯ ಎಂದು ನಮಗೆ ತಿಳಿದಿತ್ತು. ನೀವು ಮನುಷ್ಯರ ಸ್ವಭಾವವೇ ಹೀಗೆ. ತೃಪ್ತಿ ಎಂಬುದು ನಿಮಗಿಲ್ಲ. ಇದಿದ್ದರೆ ಅದು, ಅದಿದ್ದರೆ ಮತ್ತೊಂದು, ಹೀಗೆ ಬೇಕುಗಳ ಸಂತೆಯಲ್ಲಿ ಕಳೆದು ಹೋಗುತ್ತೀರಿ. ಆದ್ದರಿಂದಲೇ ನೀವು ದುಃಖಿಗಳು . ತೃಪ್ತಿಯೇ ಸುಖದ ಮೊದಲ ಹೆಜ್ಜೆ . ಆದರೆ ನಿಮಗದರ ಅರಿವು ಇಲ್ಲವೇ ಇಲ್ಲ . ಅತಿಯಾಸೆಯಿಂದ ನಿನಗೆ ಸಿಕ್ಕಿದ್ದನ್ನೂ ಕಳೆದುಕೊಂಡೆ. ಹೋಗು , ಹೊರಟುಹೋಗು ಎನ್ನುತ್ತ ನೀರಿನಲ್ಲಿ ಮುಳುಗಿ ಮಾಯವಾಯಿತು.
--------------------------------------/--------------------------------
Comments
Post a Comment