*ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?*
(ವಾಟ್ಸಾಪ್ ನಿಂದ ಸಂಗ್ರಹಿಸಿದ್ದು) *ಆಧುನಿಕ ವಿದ್ಯಾಭ್ಯಾಸ ಕೃಷಿ ಬದುಕಿಗೆ ಪೂರಕವಾಗಿದೆಯೇ?* ಸಾಮಾನ್ಯವಾಗಿ ಕೃಷಿಕನಿಗೆ ಬೆಳಗ್ಗಿನ ಹೊತ್ತು ತುರ್ತು ಕೆಲಸಗಳಿರುತ್ತವೆ. ಆ ಕಾರಣದಿಂದ ಪೇಟೆಯ ಕೆಲಸಕ್ಕಾಗಿ ಮನೆ ಬಿಡುವಾಗಲೇ ಗಂಟೆ 10 ಆಗುವುದು ಸಾಮಾನ್ಯ. ಹಾಗಾಗಿ ಪೇಟೆ ಜೀವನದ ಬೆಳಗ್ಗಿನ ಚಟುವಟಿಕೆಯ ಅರಿವು ಹೆಚ್ಚಿನ ಕೃಷಿಕರಿಗೆ ಇರುವುದಿಲ್ಲ.ಕೆಲವು ತಿಂಗಳ ಹಿಂದೆ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಅನಿವಾರ್ಯವಾಗಿ ಒಂದು ವಾರ ಕಾಲ ಪುತ್ತೂರು ಮೂಲಕ ಉಪ್ಪಿನಂಗಡಿಯವರೆಗೆ ಪ್ರಯಾಣಿಸಬೇಕಾಗಿತ್ತು. ದಾರಿ ಉದ್ದಕ್ಕೂ ಶಾಲಾ ಬಸ್ಸುಗಳ ಭರಾಟೆ ಕಂಡು ನನಗೆ ಆಶ್ಚರ್ಯ ಮತ್ತು ಕುತೂಹಲ ಎರಡೂ ಉಂಟಾಯಿತು. ಬಸ್ಸುಗಳ ಮೇಲೆ ಶಾಲೆಯ ಹೆಸರು ಮತ್ತು ಊರು ಇದ್ದ ಕಾರಣ ಯಾವೂರಿನ ಬಸ್ ಎಂದು ಸುಲಭದಲ್ಲಿ ಪತ್ತೆ ಹಚ್ಚುವಂತಾಯಿತು. ಸುಮಾರು 20 ಕಿಲೋ ಮೀಟರ್ ಆಸು ಪಾಸುಗಳಿಂದ ಪುತ್ತೂರು ಬಸ್ಸು ಆ ಊರಿಗೂ ಆ ಊರು ಬಸ್ಸು ಪುತ್ತೂರಿಗೂ ಬರುವುದನ್ನು ಕಂಡು ಆಶ್ಚರ್ಯ ಚಕಿತನಾಗಿದ್ದೆ. ಎಲ್ಲಾ ಶಾಲೆಗಳಲ್ಲಿಯೂ ಒಂದೇ ತರದ ಸರಕಾರಿ ಶಿಕ್ಷಣ ಪದ್ಧತಿಯನ್ನು ಕಲಿಸುವಾಗ, ಅಷ್ಟಷ್ಟು ದೂರದ ಪ್ರಯಾಣವನ್ನು ಮಕ್ಕಳ ಮೇಲೆ ಹೇರುವುದು ಯಾಕಾಗಿ ಎಂದು ನನಗೆ ಈವರೆಗೂ ಗೊತ್ತಾಗಿಲ್ಲ. ನಾನೆಲ್ಲಿಯೋ ಕೇಳಿದ ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಮಕ್ಕಳಿಗೆ ಪ್ರಾಪಂಚಿಕ ಅರಿವು ಬರುವುದು 12 ವರ್ಷದ ಪ್ರಾಯದವರೆಗಂತೆ. ಆ ಪ್ರಾಯದಲ್ಲಿ ನೋಡಿ,ಮಾಡಿ, ಕೇಳಿ ಕಲಿತ ವಿದ್ಯೆಗ...